ನಂದಿಧ್ವಜ 
ಕರ್ನಾಟಕ ಜನಪದ ನೃತ್ಯಗಳಲ್ಲಿ ಒಂದು. ಇದು ಶಕ್ತಿ ಪ್ರಧಾನವಾದ ಗಂಡು ಕಲೆ. ಇಲ್ಲಿ ನೃತ್ಯಕ್ಕಿಂತಲೂ ಧ್ವಜದ ಆಲಂಕಾರಿಕ ಪ್ರದರ್ಶನಕ್ಕೆ ಹೆಚ್ಚು ಮಹತ್ತ್ವ. ನೃತ್ಯ ಒಂದು ಪ್ರಾಥಮಿಕ ಅಂಶ ಅಷ್ಟೆ. ಧಾರ್ಮಿಕತೆ ಈ ಅಲಂಕಾರದ ಜೀವಾಂಶ. ಈ ಧ್ವಜ ಈಶ್ವರವಾಹನವಾದ ನಂದಿಯ ಸಂಕೇತ. ಗಣೆಯ ಮೇಲುಭಾಗದಲ್ಲಿ ಹಾರಾಡುವ ಬಾವುಟ ಶೈವಧರ್ಮದ ದಿಗ್ವಿಜಯದ ಸಂಕೇತ. ಶೈವರೇ ಇದರ ವಾರಸುದಾರರು. ಆದರೆ ಈಗ ಬೇರೆ ಜಾತಿಯ ಜನರೂ ಈ ನೃತ್ಯದಲ್ಲಿ ಭಾಗವಹಿಸುತ್ತಾರೆ. ಕರಾವಳಿಯ ಕೆಲವು ಪ್ರದೇಶಗಳನ್ನು ಬಿಟ್ಟರೆ ಕೆಲವು ವ್ಯತ್ಯಾಸಗಳೊಂದಿಗೆ ಈ ಕಲೆ ಕರ್ನಾಟಕದಲ್ಲೆಲ್ಲ ಬಳಕೆಯಲ್ಲಿರುವುದು ಕಂಡುಬರುತ್ತದೆ. ಕರ್ನಾಟಕದ ಉತ್ತರ ಭಾಗವೇ ಈ ಕಲೆಯ ಉಗಮ ಸ್ಥಾನವೆಂದು ತಿಳಿದುಬರುತ್ತದೆ. ಇದಕ್ಕೆ ಈ ಕಲೆಯ ಹಿನ್ನೆಲೆಯಲ್ಲಿರುವ ಧಾರ್ಮಿಕ ಅಂಶವೇ ಕಾರಣವಿರಬಹುದು. ಆದರೆ ದಕ್ಷಿಣ ಕರ್ನಾಟಕದಲ್ಲಿರುವಷ್ಟು ವಿವಿಧ ಬಣ್ಣ, ಬೆಡಗು ಉತ್ತರದ ಕಡೆಯಲ್ಲಿಲ್ಲ. ದಕ್ಷಿಣದ ಬಣ್ಣ, ಬೆಡಗುಗಳಿಗೆ ಒಂದು ಕಾರಣವೂ ಇದೆ. ರಾಮಾನುಜಾಚಾರ್ಯರಿಂದ ವೈಷ್ಣವ ಮತ ದಕ್ಷಿಣದಲ್ಲಿ ಪ್ರವರ್ಧಮಾನಕ್ಕೆ ಬಂದಾಗ ನಂದಿಧ್ವಜದಂತೆಯೆ ದಕ್ಷಿಣದಲ್ಲಿ ಪಟಾಕುಣಿತ ಆರಂಭವಾಯಿತು. ಇದು ನಂದಿಧ್ವಜಕ್ಕೆ ಪ್ರತಿಸ್ಪರ್ಧಿಯಾಗಿ ಹುಟ್ಟಿದ ಕಲೆ ಎಂದು ಹೇಳುವವರಿದ್ದಾರೆ. ದಕ್ಷಿಣದ ಒಕ್ಕಲಿಗ ಜನಾಂಗದಲ್ಲಿ ಇದ್ದ ಸುಗ್ಗಿ ಕುಣಿತದ ಮುಂದುವರಿದ ರೂಪವೇ ಪಟಾಕುಣಿತ. ನಂದಿಧ್ವಜಕ್ಕೆ ವ್ಯಾಸಗೋಲು ಎಂದು ಕರೆಯುವುದರ ಹಿನ್ನೆಲೆ ಸಹ ಇಲ್ಲಿ ಗಮನಾರ್ಹವಾದುದು. ದಕ್ಷಿಣ ಕರ್ನಾಟಕದಲ್ಲಿ ಇದನ್ನು ವ್ಯಾಸರ ತೋಳು ಎಂದು ಕರೆಯುವುದುಂಟು. ವೈಷ್ಣವ ಸಂಪ್ರದಾಯದ ವ್ಯಾಸಮುನಿಗಳ ತೋಳನ್ನು ತೆಗೆದುಕೊಂಡು ನಂದಿಧ್ವಜದ ಕೋಲನ್ನಾಗಿ ಬಳಸಿಕೊಳ್ಳಲಾಯಿತಂತೆ. ಮತ್ತೆ ಕೆಲವರ ಪ್ರಕಾರ ವ್ಯಾಸರ ತೋಳು ಎನ್ನುವ ಸಾಧನವೊಂದನ್ನು ಧ್ವಜದ ಕೆಳಗೆ ಕಟ್ಟುತ್ತಿದ್ದರೆಂದು ತಿಳಿಯುತ್ತದೆ. ಇದು ಶೈವಮತ ವೈಷ್ಣಮತದ ಮೇಲೆ ನಡೆಸಿದ ದಿಗ್ವಿಜಯದ ಸಂಕೇತವಂತೆ. ಇತ್ತೀಚಿನ ದಿನಗಳಲ್ಲಿ ಆ ತೋಳನ್ನು ಬಳಸಲಾಗುವುದಿಲ್ಲವಂತೆ. ಈ ಕಾರಣದಿಂದ ನಂದಿ ಧ್ವಜ ನಿರಂತರವಾಗಿ ವೈಷ್ಣವ ಮತ್ತು ಶೈವಮತಗಳ ಮಧ್ಯೆ ಆಗುತ್ತಿದ್ದ ಪೈಪೋಟಿ ಮನೋಭಾವನೆಯ ಪ್ರತೀಕವೆಂದರೂ ಸರಿಯೆ.

    ಈ ಧ್ವÀಜದ ಹುಟ್ಟಿನ ಕಾರಣ ಸಹ ಮೇಲಿನ ಅಭಿಪ್ರಾಯವನ್ನು ಸಮರ್ಥಿಸುತ್ತದೆ. ನಂದೀಶ್ವರ ಶಿವನ ಅಪ್ಪಣೆಯಂತೆ ಭೂಲೋಕದ ಅನ್ಯಾಯವನ್ನು ತೊಡೆದು ಹಾಕಲು ನಾಟ್ಯ ಮಾಡಿಕೊಂಡು ಶಿವಗಣದ ಜೊತೆಯಲ್ಲಿ ಬಂದುದರ ಸಂಕೇತವೇ ನಂದಿಧÀ್ವಜವೆಂದು ಹೇಳುತ್ತಾರೆ. ಇದಲ್ಲದೆ ಬೇರೆ ರೀತಿಯ ಹೇಳಿಕೆಯೂ ಇದೆ. ದಕ್ಷಬ್ರಹ್ಮನ ಯಜ್ಞವನ್ನು ಕೆಡಿಸಿದ ವೀರಭದ್ರ, ಯಾಗದಲ್ಲಿ ನೆರೆದಿದ್ದ ದೇವಮುನಿಗಳನ್ನೆಲ್ಲ ಸಂಹರಿಸಿದ. ಮುನಿಗಳ ತೋಳುಗಳನ್ನೇ ಧ್ವಜದ ಕೋಲನ್ನಾಗಿ ಮಾಡಿದ (ಯಜ್ಞಯಾಗಾದಿಗಳಲ್ಲಿ ಪುರೋಹಿತರಾಗಿ ಭಾಗವಹಿಸಿದ ಮುನಿಗಳು ವೈಷ್ಣವರೆಂಬ ಕಲ್ಪನೆ ಇದರ ಹಿನ್ನೆಲೆಯಲ್ಲಿ ಇದ್ದಂತೆ ಕಾಣುತ್ತದೆ). ದಕ್ಷನ ಅರಮನೆಯ ಸಿಂಹದ ಚರ್ಮವನ್ನು ಸುಲಿದು ಬಾವುಟವನ್ನಾಗಿ ಮಾಡಿದ. ಆ ಧ್ವಜದ ನಿರಂತರ ಕಾವಲಿಗಾಗಿ ಧ್ವಜದ ಕೆಳಗಡೆ ನಂದಿಯನ್ನು ಪ್ರತಿಷ್ಠಾಪಿಸಿದ. ಹೀಗೆ ದುರಹಂಕಾರಿಯಾದ ದಕ್ಷ ಮತ್ತು ಅವನ ಯಜ್ಞಕ್ಕೆ ಕಾರಣರಾದವರ ಸಂಹಾರದ ದಿಗ್ವಿಜಯದ ಜ್ಞಾಪಕಾರ್ಥವಾಗಿ ಭೂಲೋಕದಲ್ಲಿ ನಂದಿಧ್ವಜ ಉಳಿಯುವಂತೆ ಮಾಡಿದ. ನಂದಿ ಈ ಧ್ವಜದ ಒಡೆಯನಾದುದರಿಂದ ಇದು ಶೈವಮಠದ ಒಂದು ಸಾಂಪ್ರದಾಯಿಕ ನೃತ್ಯಕಲೆಯಾಯಿತು.

    ನಂದಿಧ್ವಜವನ್ನು ನಂದಿಕೋಲು, ನಂದಿಕಂಬ, ವ್ಯಾಸಗೋಲು ಮುಂತಾಗಿ ಕರೆಯುತ್ತಾರೆ. ಇದಲ್ಲದೆ ಆಯಾ ಪ್ರದೇಶಕ್ಕೆ ಸೀಮಿತವಾದ ಪ್ರತ್ಯೇಕ ಹೆಸರುಗಳೂ ಇವೆ. ನಂದಿಧ್ವಜವನ್ನು ಮುಖ್ಯವಾಗಿ ಮೂರು ಭಾಗಗಳಾಗಿ ವಿಂಗಡಿಸಬಹುದು. 1. ನಂದಿಯ ಹಲಗೆ, 2. ಹರಡೇವು ಅಲಂಕಾರ, 3. ಬಾವುಟ.

    1. ನಂದಿ ಹಲಗೆ: ನಂದಿಧ್ವಜ ಸಾಮಾನ್ಯವಾಗಿ ಹದಿನೆಂಟು ಮೊಳ ಅಥವಾ 25 ರಿಂದ 30 ಅಡಿ ಎತ್ತರವಿರುವ ಬಿದುರುಕೋಲು, ಆರರಿಂದ ಹತ್ತು ಅಂಗುಲ ಸುತ್ತಳತೆಯುಳ್ಳದ್ದು. ಕಲಾವಿದರ ಸಾಮಾನ್ಯ ಅಭಿಪ್ರಾಯದಂತೆ ಎರಡು ಮಣ ತೂಕವಿರುವಂಥದು. ಬಿದುರುಮೆಳೆಯಲ್ಲಿ ಸರಿಯಾದ ಎತ್ತರದ ದಪ್ಪದ ಕೋಲನ್ನು ಆಯ್ದು ಕತ್ತರಿಸಿ, ಕೋಲನ್ನು ಎಲ್ಲೂ ನೆಲಕ್ಕೆ ಮುಟ್ಟಿಸದೆ ದೇಗುಲಕ್ಕೆ ತಂದು ಅದಕ್ಕೆ ಹಲಗೆ ಬಿಗಿಯುತ್ತಾರೆ. ಕೋಲಿನ ಮೊದಲಿನ ಐದು ಅಡಿ ಯಾವ ಅಲಂಕಾರವೂ ಇಲ್ಲದೆ ಬೆತ್ತಲೆಯಾಗಿರುತ್ತದೆ. ಐದನೆಯ ಅಡಿಯ ಕೊನೆಯಲ್ಲಿ ನಂದಿ ಹಲಗೆಯನ್ನು ಜೋಡಿಸಿರುತ್ತಾರೆ. ಇದನ್ನು ವೀರಭದ್ರನ ಹಲಗೆಯೆಂದೂ ಕರೆಯುತ್ತಾರೆ. ಈ ಹಲಗೆಯ ಒಂದು ಕೊನೆ, ಕೋಲಿಗೆ ಬಿಗಿಯಾಗಿ ಅಳವಡಿಸಲ್ಪಟ್ಟಿರುತ್ತದೆ. ಮುಂದಿನ ಭಾಗದ ಹಲಗೆಯ ಮೇಲೆ ನಂದಿಯ ಚಿಕ್ಕ ಪ್ರತಿಮೆಯಿರುತ್ತದೆ. ಕೆಲವೊಮ್ಮೆ ಉರಿಯುವ ಹಣತೆಯ ವ್ಯವಸ್ಥೆಯನ್ನೂ ಮಾಡಿರುವುದುಂಟು. ನಂದಿಗೆ ಬೆಳ್ಳಿಯ ಕಟ್ಟಿನ ಶೃಂಗಾರ ಮಾಡಿರುತ್ತಾರೆ. ಹಲಗೆಯ ಭಾಗಗಳ ಮೇಲೆ ವಿಭೂತಿ ಬಳಿದಿರುತ್ತಾರೆ. ಹಲಗೆ ನಂದಿಮರ ಅಥವಾ ಇತರ ಒಳ್ಳೆಯ ಮರದಿಂದ ಆದದ್ದು.

    2. ಹರಡೇವು: ಮೇಲಿನ ಐದು ಅಡಿಯಿಂದ ಮುಂದಿನ ಭಾಗ ತುಂಬ ಅಲಂಕಾರಿಕವಾದುದು. ಗಳುವಿನ ಕೊನೆಯ ಕೆಲವು ಅಡಿಗಳನ್ನು ಬಾವುಟಕ್ಕಾಗಿ ಬಿಟ್ಟು, ಕೆಳಗಿನ ನಂದಿ ಹಲಗೆಯ ವರೆಗೆ ಹಿತ್ತಾಳೆ ಅಲಂಕರಣ ಸಾಧನಗಳಿಂದ ಕೋಲನ್ನು ಶೃಂಗಾರ ಮಾಡುತ್ತಾರೆ. ಈ ಸಾಧನಗಳೆಂದರೆ ಹರಡೇವು ಅಥವಾ ಹಂಡೆ, ಕೊಳಗಗಳು ಮತ್ತು ಮಾವಿನ ಮೊಗ್ಗು ಮೊದಲಾದ ಆಭರಣಗಳಿಂದ ಕೂಡಿದ ತಟ್ಟೆಗಳು. ಹಂಡೆಗಳಿಗೆ ಗಗ್ಗರಗಳೆಂದೂ ಹೆಸರು. ಚಿಕ್ಕಚಿಕ್ಕ ಗಗ್ಗರಗಳನ್ನು ಎತ್ತಿನ ಕೋಡಿಗೆ ಮತ್ತು ಅವುಗಳ ಹಗ್ಗಕ್ಕೆ ಬಳಸುತ್ತಾರೆ. ಒಂದು ಗಗ್ಗರಕ್ಕೆ ಎರಡು ಹಿತ್ತಾಳೆ ಅರ್ಧ ಗೋಳಗಳು ಸೇರಿಕೊಂಡಿರುತ್ತವೆ. ಮಧ್ಯೆ ಸಾಕಷ್ಟು ಪ್ರಮಾಣದ ರಂಧ್ರವಿರುತ್ತದೆ. ಒಳಗಡೆಗೆ ಒಂದೆರಡು ಹಿತ್ತಾಳೆಯ ಸಣ್ಣ ಗುಂಡುಗಳನ್ನು ಸೇರಿಸಿರುತ್ತಾರೆ. ಅವು ಅಲುಗಾಡಿದರೆ ಕಿಣಕಿಣ ಶಬ್ದವಾಗುತ್ತದೆ. ಈ ರೀತಿಯ ದೊಡ್ಡ ಗಗ್ಗರಗಳು ಅಥವಾ ಹಂಡೆಗಳನ್ನು ಗಣೆಗೆ ಜೋಡಿಸುತ್ತಾರೆ. ಎರಡು ಹಂಡೆಗಳ ಮಧ್ಯಕ್ಕೆ ಒಂದು ಕೊಳಗ. ಇದೂ ತೆಳುವಾದ ಹಿತ್ತಾಳೆಯ, ಗಣೆಯನ್ನು ಸುತ್ತಿಕೊಂಡಂತೆ ಇರುವ, ಸಾಧನ. ಹಂಡೆ ಮತ್ತು ಕೊಳಗಗಳ ಮಧ್ಯೆ ತೆಳುವಾದ ಹಿತ್ತಾಳೆ ತಟ್ಟೆಗಳಿರುತ್ತವೆ. ಇವುಗಳ ಕೊನೆ ಸ್ವಲ್ಪವೇ ಮಡಿಸಿದಂತಿದ್ದು, ಆ ಮಡಿಕೆಯಲ್ಲಿ ಚಿಕ್ಕ ಚಿಕ್ಕ ರಂಧ್ರಗಳನ್ನು ಮಾಡಿ ಮಾವಿನಮೊಗ್ಗಿನಾಕಾರದ ಚಿಕ್ಕ ಚಿಕ್ಕ ಹಿತ್ತಾಳೆ ಚೂರುಗಳನ್ನು ಜೋಡಿಸಿರುತ್ತಾರೆ. ಧ್ವಜ ಅಲುಗಾಡಿದಂತೆ ಇವು ಅಲುಗಾಡಿ ಶಬ್ದ ಮಾಡುತ್ತವೆ. ಇವೆಲ್ಲ ಸೇರಿ ನಂದಿಧ್ವಜಕ್ಕೆ ಒಂದು ಸೊಬಗು ಬರುತ್ತದೆ. ಹರಡೇವುಗಳ ಮಾದರಿಯಲ್ಲೇ ದೇವಸ್ಥಾನದ ಗೋಪುರಕ್ಕೆ ಹಾಕುವ ಕಳಶಗಳೂ ಇರುತ್ತವೆ. ಆದುದರಿಂದ ನಂದಿಧ್ವಜದ ಹರಡೇವುಗಳು ಆ ಗೋಪುರದ ಧಾರ್ಮಿಕಕಲ್ಪನೆಯನ್ನು ಮನಸ್ಸಿಗೆ ತರುತ್ತವೆ. ಇದೇ ಉದ್ದೇಶವಿದ್ದರೂ ಇರಬಹುದು.

    ಉತ್ತರ ಕರ್ನಾಟಕದ ನಂದಿಧ್ವಜದ ಕೋಲು ದಕ್ಷಿಣ ಕರ್ನಾಟಕದ ನಂದಿಕೋಲಿನಂತೆ ಆಭರಣಗಳ ಅಲಂಕಾರದಿಂದ ಕೂಡಿರುವುದಿಲ್ಲ. 25 ರಿಂದ 30 ಅಡಿ ಉದ್ದವಿರುವ ಗಳುವಿಗೆ ಬಿಳಿಬಣ್ಣದ ಪಟ್ಟೆಗಳನ್ನು ಹಾಕಿರುತ್ತಾರೆ. ಪಟ್ಟೆಗಳ ಮಧ್ಯೆ ಬೇರೆ ಬಣ್ಣದ ಪಟ್ಟೆಗಳನ್ನು ಹಾಕಬಹುದು ಇಲ್ಲವೇ ಬಿಡಬಹುದು. ಬಿಳಿಬಣ್ಣದ ಪಟ್ಟೆಗಳು ಬೆಳ್ಳಿಯ ಕಟ್ಟುಗಳಂತೆ ಕಾಣುತ್ತವೆ. ಮೇಲುಭಾಗದಲ್ಲಿ ಒಂದು ಮಂಟಪದ ರೀತಿಯ ನಂದಿ ಧ್ವಜವಿರುತ್ತದೆ. ಮಂಟಪವನ್ನು ಹೂವಿನಿಂದ ಶೃಂಗರಿಸುತ್ತಾರೆ. ಒಳಗಡೆ ನಂದಿಯ ಸಂಕೇತವಿರುತ್ತದೆ. ಕೋಲಿನ ಈ ಮೇಲ್ಭಾಗವನ್ನು ಕಳಸ ಎಂದೂ ಕರೆಯುತ್ತಾರೆ.

    3. ಧ್ವಜದ ಬಟ್ಟೆ: ಕಾವಿ ಬಣ್ಣದ ರೇಷ್ಮೆ ಬಟ್ಟೆ ಗಳುವಿಗೆ ಹೊಂದಿಕೊಂಡ ಭಾಗದಲ್ಲಿ ಅಗಲವಾಗಿದ್ದು, ಮುಂದುವರಿಯುತ್ತಾ ಹೋದಂತೆ ಚಿಕ್ಕದಾಗುತ್ತದೆ. ಕೊನೆಯ ಭಾಗ ಚೂಪಾಗಿರುತ್ತದೆ. ಕೆಲವೊಮ್ಮೆ ಈ ಕೊನೆ ಭಾಗಕ್ಕೆ ಒಂದು ರೇಷ್ಮೆ ಗೊಂಡೇವು (ಗೊಂಡೆ ಹೂವು; ಗೊಂಚಲು ಹೂವು ?) ಸೇರಿಸಿರುತ್ತಾರೆ. ಇದರ ಎರಡು ಕಡೆಗೂ ಅಲ್ಲಲ್ಲಿ ರೇಷ್ಮೆ ನೂಲಿನ ಗೊಂಡೆಹೂವುಗಳನ್ನು ಸೇರಿಸಿ ಹೊಲಿದಿರುತ್ತಾರೆ. ಈ ಬಟ್ಟೆ ಹದಿನೆಂಟು ಮೊಳವಿರಬೇಕೆಂದು ಹೇಳುತ್ತಾರೆ. ಅಳತೆಯಲ್ಲಿ ಇತ್ತೀಚೆಗೆ ಹೆಚ್ಚು ಕಡಿಮೆ ಆಗಿರುವುದನ್ನು ಕಾಣಬಹುದು.

    ಧ್ವಜದ ಗಳುವಿನ ಕೊನೆಗೆ ಒಂದು ಬೆಳ್ಳಿ ಅಥವಾ ಹಿತ್ತಾಳೆಯ ಛತ್ರಿಯಿರುತ್ತದೆ. ಛತ್ರಿಯ ಸುತ್ತ ಮಾವಿನ ಮೊಗ್ಗಿನ ಅಲಂಕಾರಗಳಿರುತ್ತದೆ. ಛತ್ರಿಯ ಮೇಲ್ಭಾಗ ಬೌದ್ಧ ಸ್ತೂಪದಾಕಾರದಲ್ಲಿ ಕೊನೆಗೊಂಡಿರುತ್ತದೆ. ಧ್ವಜದ ಗಳುವಿನ ಕೆಳಭಾಗ ಮಟ್ಟಸವಾಗಿರುತ್ತದೆ. ಈ ಮಟ್ಟಸ ಭಾಗವನ್ನು ತೂಗಿ ಹಿಡಿದು ಕುಣಿಯಲು, ನೃತ್ಯದವರು ಇಂದು ರೀತಿಯ ಬಟ್ಟೆಯನ್ನು ಬಳಸುತ್ತಾರೆ. ಇದು ನೃತ್ಯಕಾರನ ಹೆಗಲಿನಿಂದ ಬಂದು ಸೊಂಟದ ಕೆಳಗೆ ನಿಂತಿರುತ್ತದೆ. ಈ ಬಟ್ಟೆಯ ಮಧ್ಯಭಾಗ ಅಥವಾ ನೃತ್ಯಾಕಾರದ ಸೊಂಟದ ಕೆಳಗೆ ಇಳಿಬಿಟ್ಟಿರುವ ಭಾಗ ಗುಂಡಿಯಂತಿದ್ದು, ಧ್ವಜದ ಗಳುವಿನ ಭಾಗ ಇಲ್ಲಿ ನಿಲ್ಲುತ್ತದೆ. ಈ ಬಟ್ಟೆಗೆ ಮಟ್ಟಣೆ ಬಟ್ಟೆ, ಗಸಿ ಚೀಲ, ಬಗಲ್ ಚೀಲ ಅಥವಾ ನವಾರ ಎಂದು ಹೆಸರು.

    ನಂದಿಧ್ವಜಗಳು ಬಂದಿರಬಹುದು ಅಥವಾ ಒಂದಕ್ಕಿಂತ ಹೆಚ್ಚಿರಬಹುದು. ಇವುಗಳ ಸಂಖ್ಯೆ ಹೆಚ್ಚಾದಂತೆ ನೃತ್ಯಕಾರರ ಸಂಖ್ಯೆಯೂ ಹೆಚ್ಚಾಗುತ್ತದೆ. ದಕ್ಷಿಣ ಕರ್ನಾಟಕದ ನಂದಿಧ್ವಜ ಹೆಚ್ಚು ತೂಕವಿದ್ದು ಅದನ್ನು ನೋಡಿಕೊಳ್ಳಲು ಕೊನೆಯ ಪಕ್ಷ ಎಂಟು ಜನರ ಗುಂಪೇ ಬೇಕಾಗುತ್ತದೆಂದು ಹೇಳಲಾಗುತ್ತದೆ. ಇವರೆಲ್ಲರೂ ಒಬ್ಬೊಬ್ಬರಾಗಿ ನೃತ್ಯದಲ್ಲಿ ಭಾಗವಹಿಸುತ್ತಾರೆ. ಇವರು ಸೊಂಟಕ್ಕೆ ವೀರಗಾಸೆ, ದೇಹಕ್ಕೆ ಕಸೆ ಅಂಗಿ, ತಲೆಗೆ ರುಮಾಲು, ಹಣೆಗೆ ವಿಭೂತಿ ಧರಿಸುತ್ತಾರೆ. ಧ್ವಜವನ್ನು ಎತ್ತವುದಕ್ಕೆ ಮೊದಲು ಸ್ನಾನ ಮಾಡಿ ಬರುತ್ತಾರೆ. ಮೊದಲಾಗಿ ಧ್ವಜಕ್ಕೆ ಮೂರು ಬಾರಿ ಶರಣು ಮಾಡುತ್ತಾರೆ. ಶೈವರಲ್ಲದವರು ಇದರಲ್ಲಿ ಭಾಗವಹಿಸಿದರೂ ನಿಯಮಗಳ ಪಾಲನೆಯಲ್ಲಿ ಶ್ರದ್ಧೆವಹಿಸುತ್ತಾರೆ. ಧ್ವಜಗಳನ್ನು ಶಿವರಾತ್ರಿ, ದೀಪಾವಳಿ, ಗಣಪತಿ ಉತ್ಸವ ಮತ್ತು ಶೈವಾಚಾರ್ಯರನ್ನು ಸ್ವೀಕರಿಸುವ ಸಂದರ್ಭದಲ್ಲಿ ಉತ್ಸವದ ಮುಂಚೂಣಿಯಲ್ಲಿ ಕೊಂಡೊಯ್ಯುತ್ತಾರೆ.

    ಇದರಲ್ಲಿ ಬಳಸುವ ವಾದ್ಯವೂ ನಿರ್ದಿಷ್ಟವಾದ್ದು. ನಗಾರಿ, ನಾಗಸ್ವರ, ಕರಡೆ ಮತ್ತು ಚಮ್ಮೇಳ ಮುಖ್ಯ ವಾದ್ಯಗಳು. ಉತ್ತರ ಕರ್ನಾಟಕದ ಕೆಲವು ಕಡೆಗಳಲ್ಲಿ ತಮಟೆ ಮತ್ತು ತಾರಸಿಗಳೆಂಬ ವಾದ್ಯಗಳನ್ನು ಬಳಸುತ್ತಾರೆ. ಧ್ವಜನೃತ್ಯದಲ್ಲಿರುವ ಒಂದು, ಎರಡು, ಮೂರು, ನಾಲ್ಕು ಹೆಜ್ಜೆಗಳ ಮತ್ತು ತಿರುಣಿ ಮಾದರಿಯ ರೀತಿಗಳಿಗೆ ತಕ್ಕಂತೆ ವಾದ್ಯದ ಗತಿಯೂ ಬದಲಾಗುತ್ತಿರುತ್ತದೆ. ಈ ನೃತ್ಯದಲ್ಲಿ ಪ್ರಮುಖವಾದುದು ಧ್ವಜದ ಆಕರ್ಷಣೆಯೇ. ಹೆಚ್ಚು ಶ್ರಮವಹಿಸಿ ನೃತ್ಯಕಾರ ಧ್ವಜವನ್ನು ಆತು ಹಿಡಿಯಬೇಕು, ಕುಣಿಯಬೇಕು. ಆದುದರಿಂದ ಅವನಿಗೆ ಶಕ್ತಿ, ತಾಳ್ಮೆ, ಸಾಕಷ್ಟು ಅಭ್ಯಾಸ ಇರಬೇಕಾಗುತ್ತದೆ. ಶ್ರಮಸಾಧ್ಯವಾದ ಈ ನೃತ್ಯವನ್ನು ಗಂಟೆಗಟ್ಟಲೆ ನಿರ್ವಹಿಸುವ ನೃತ್ಯಕಾರರಿದ್ದಾರೆ. 
(ಎಚ್.ಎಸ್.ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ